ಇರುಗಪ್ಪ ದಂಡನಾಯಕ -
ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಅರಸನಾದ ಇಮ್ಮಡಿ ಹರಿಹರನ (1376-1404) ಮಂತ್ರಿ. ದಂಡನಾಯಕರಲ್ಲಿ ಒಬ್ಬ. ತಂದೆ ಬೈಚೇಯ ದಂಡನಾಯಕ ಒಂದನೆಯ ಬುಕ್ಕರಾಯನ ಪ್ರಧಾನಿಗಳಲ್ಲಿ ಒಬ್ಬನಾಗಿದ್ದ. ಜೈನಮತೀಯ. ಪಂಡಿತಾರ್ಯ ಈತನ ಗುರು. 1385ರ ಶಾಸನವೊಂದರ ಪ್ರಕಾರ ರಾಜಧಾನಿಯಾದ ವಿಜಯನಗರದಲ್ಲಿ ಕುಂತಜಿನಾಲಯ ಎಂಬ ಬಸದಿಯನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಈಗ ಹಂಪೆಯಲ್ಲಿರುವ ಗಾಣಗಿತ್ತಿ ದೇವಾಲಯವೇ ಈತ ಕಟ್ಟಿಸಿದ ಬಸದಿಯಾಗಿರಬೇಕೆಂದು ವಿದ್ವಾಂಸರ ಊಹೆ. ಶ್ರವಣಬೆಳಗೊಳದಲ್ಲಿ ಒಂದು ಕೆರೆಯನ್ನು ಕಟ್ಟಿಸಿ ಒಂದು ತೋಪನ್ನು ಬೆಳೆಸಿದನೆಂದು ಮತ್ತೊಂದು ಶಾಸನದಿಂದ ತಿಳಿದುಬರುತ್ತದೆ. ಇರುಗಪ್ಪ ದಕ್ಷ ದಂಡನಾಯಕನಾಗಿದ್ದುದಲ್ಲದೆ ಕವಿಯೂ ಆಗಿದ್ದ. ಇವನ ಕಾಲದಲ್ಲಿ ಜೈನಮತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಸಂಸ್ಕøತದ ನಾನಾರ್ಥರತ್ನಮಾಲಾ ಎಂಬ ಗ್ರಂಥ ಈತನಿಂದ ರಚಿತವಾಯಿತೆಂದು ಹಲವು ವಿದ್ವಾಂಸರೂ ಇರುಗಪ್ಪನಿಂದ ಪೋಷಿತನಾದ ಭಾಸ್ಕರ ಕವಿಯಿಂದ ರಚಿತವಾಯಿತೆಂದು ಮತ್ತೆ ಕೆಲವರೂ ಅಭಿಪ್ರಾಯಪಟ್ಟಿದ್ದಾರೆ. ಇಮ್ಮಡಿ ಬೈಚ ಮತ್ತು ಇಮ್ಮಡಿ ಇರುಗಪ್ಪ ಇವರು ಈತನ ಮಕ್ಕಳು. ಇಮ್ಮಡಿ ದೇವರಾಯನ ಆಳ್ವಿಕೆಯ ಪ್ರಾರಂಭದಲ್ಲಿ ಇರುಗಪ್ಪ ದಂಡನಾಯಕ ಮರಣಹೊಂದಿದ.									
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ